ಮೋಹನ್ ಕುಂದರ್, ಬನ್ನಂಜೆ::
ನಮ್ಮಲ್ಲಿ ಹೆಚ್ಚಿನವರಲ್ಲಿ ಒಂದಲ್ಲಾ ಒಂದು ರೀತಿಯ ವಾಟ್ಸಪ್ ಗುಂಪುಗಳಿವೆ. ಅದು ಕಾರ್ಯ ಕ್ಷೇತ್ರಕ್ಕೆ ಅಥವಾ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಲೆ, ಸಾಹಿತ್ಯ, ಶೈಕ್ಷಣಿಕ, ಸಂಘ-ಸಂಸ್ಥೆ, ಗೆಳೆಯರ ಹಾಗೂ ಇನ್ನಿತರ ಯಾವುದೇ ಕ್ಷೇತ್ರಕ್ಕೆ ಸಂಬಂಧ ಪಟ್ಟ ಗುಂಪು ಆಗಿರ ಬಹುದು. ಪ್ರತೀ ಗುಂಪಲ್ಲೂ ಆಯಾಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸಂದೇಶಗಳ ಸಂವಹನ ನಡೆಯುವುದು ಸ್ವಾಭಾವಿಕ. ಆದರೆ, ಇಂದು ಹೆಚ್ಚಿನ ಗುಂಪುಗಳಲ್ಲಿ ಸಮಾಜ ಮುಖಿಯ ಬದಲು ರಾಜಕೀಯ ಮುಖಿಗೆ ಹೆಚ್ಚು ಒತ್ತು ಕೊಟ್ಟು, ಅದರಲ್ಲೂ ಕುಹಕ, ಕ್ಷುಲ್ಲಕ ಹಾಸ್ಯ, ವಿಡಂಬನೆ, ಗೇಲಿ ಮಾಡುವ, ಅವಮಾನಿಸುವ, ಆರೋಪ-ಪ್ರತ್ಯಾರೋಪ, ಅವಹೇಳನಕಾರಿ, ಠೀಕೆ-ಟಿಪ್ಪಣಿ, ನಕಾರಾತ್ಮಕ, ಅಶ್ಲೀಲ, ಧಾರ್ಮಿಕ ಭಾವನೆಯನ್ನು ಕೆಣಕುವ ಹಾಗೂ ಸತ್ಯಕ್ಕೆ ದೂರ ಇರುವ ಆಡಿಯೋ, ವೀಡಿಯೋ ಸಂದೇಶಗಳು ವಿಫುಲವಾಗಿ ಹರಿದಾಡುವುದು ಕಂಡು ಬರುತ್ತದೆ. ಚುನಾವಣೆಯ ಸಮಯದಲ್ಲಂತೂ ಇದರ ಹರಿದಾಟ ಕೇಳುವುದೇ ಬೇಡ. ಇಂತಹ ರಾಜಕೀಯ ಪ್ರೇರಿತ, ಬೆಂಬಲಿತ/ವಿರುದ್ಧ, ಗೊಂದಲಯುಕ್ತ ಸಂದೇಶಗಳಿಂದ ಗುಂಪಿನ ಸದಸ್ಯರಿಗೆ ಪ್ರಯೋಜನ ಆಗುವ ಬದಲು ಕಿರಿಕಿರಿ ಆಗುವುದೇ ಜಾಸ್ತಿ. ಕೇವಲ ರಾಜಕೀಯ ಪಕ್ಷಗಳ ಅತಿರೇಕದ ಪ್ರಚಾರ, ಪ್ರಸಾರ ಮತ್ತು ವಿರೋಧಾಭಾಸದ ಸಂದೇಶಗಳು ವಾಟ್ಸಪ್ ಗಳಲ್ಲಿ ಹರಿದಾಡುವುದರಿಂದ ನಮ್ಮ ಹಣ, ಸಮಯ ಮತ್ತು ಶಕ್ತಿಯ ಅನಾವಶ್ಯಕ ವ್ಯಯವಾಗುತ್ತದೆಯೇ ಹೊರತು ಪ್ರಯೋಜನ ಇಲ್ಲ, ಆದರೆ, ಇದರ ಲಾಭ ಪಡೆಯುವವರು ಇಂಟರ್ ನೆಟ್ ಕಂಪನಿ ಮತ್ತು ಸಂಬಂಧ ಪಟ್ಟ ರಾಜಕೀಯ ಪಕ್ಷಗಳು. ಇದು ಸಾಮಾಜಿಕ ಮಾಧ್ಯಮದ ಬಳಕೆಯಲ್ಲಿ ನಮ್ಮ ಸಭ್ಯತೆಯ ಕೊರತೆಯನ್ನು ತೋರಿಸಿ ಕೊಡುತ್ತದೆ.
ಹಾಗಂತ ರಾಜಕೀಯ ಪ್ರಜ್ಞೆ ಬೇಡ ಎಂದು ಅರ್ಥ ಅಲ್ಲ. ಸರಕಾರದ ಜನಪರ ಕಲ್ಯಾಣ ಕೆಲಸ, ನೀತಿ, ಯೋಜನೆ, ಪ್ರಗತಿಯನ್ನು ಪಕ್ಷ ಭೇದ ಮರೆತು ಅದರ ಮೂಲ ಸ್ವರೂಪದಲ್ಲೇ ಆತ್ಮಸಾಕ್ಷಿಯಾಗಿ ಜನರಿಗೆ ತಲುಪಿಸಿ ಅರಿವು, ಜಾಗ್ರತಿ ಮೂಡಿಸುವುದಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸುವುದು ಸರಿ. ಆದರೆ, ಸಂದೇಶದ ನೆಪದಲ್ಲಿ ಪಕ್ಷದ ಬಗ್ಗೆ ಏಕ ನೀತಿ ಅನುಸರಿಸುವುದು ಮತ್ತು ಪಕ್ಷದ ವಕ್ತಾರರಂತೆ ವರ್ತಿಸುವುದು ಸರಿಯಲ್ಲ. ವಾಟ್ಸಪ್ ಗುಂಪು ರಾಜಕೀಯ ಕ್ಷೇತ್ರಕ್ಕೆ ಸಂಬಂಧ ಪಟ್ಟದ್ದಾಗಿದ್ದರೆ ಅದನ್ನು ಪ್ರಶ್ನಿಸುವ ಪ್ರಮೇಯವೇ ಇರುತ್ತಿರಲಿಲ್ಲ. ಅದನ್ನು ಹೊರತು ಪಡಿಸಿದ ಗುಂಪುಗಳಲ್ಲೂ ಅಸಂಖ್ಯಾತ ರಾಜಕೀಯದ ಸಂದೇಶ ಹರಿದಾಡುವಾಗ ಮಾತ್ರ ಈ ಪ್ರಶ್ನೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅದರ ಇತಿ-ಮಿತಿಯನ್ನು ಅರಿತು ಸಭ್ಯತೆಯನ್ನು ಕಾಪಾಡ ಬೇಕಾಗುತ್ತದೆ.
ಅಲ್ಲದೆ, ಕೆಲವರು ಸಂದೇಶ ಕಳಿಸುವಾಗ ಅದರ ವಸ್ತುನಿಷ್ಠತೆ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ದ್ರಢೀಕರಿಸದೆ, ಇತರರಿಂದ ಮೆಚ್ಚುಗೆ ಗಳಿಸುವ ದ್ರಷ್ಟಿಯಿಂದ ಅಥವಾ ತಾನೇ ಮೇಲೆಂದು ತೋರಿಸಲು ಬಂದದ್ದನ್ನೆಲ್ಲಾ ಫಾರ್ವರ್ಡ್ ಮಾಡುವ ಭರಾಟೆಯಲ್ಲಿ ಪೈಪೋಟಿ ನಡೆಸಿದರೆ, ಅನಾವಶ್ಯಕ ಪ್ರತಿಕ್ರಿಯೆ, ವಾದ-ಪ್ರತಿವಾದಕ್ಕಿಳಿದರೆ, ಕ್ಷುಲ್ಲಕ ರಾಜಕೀಯ ಮತ್ತು ವೈರತ್ವ ಬೆಳೆಸಿದರೆ ಆಗ ಒಂದು ಮೂಲ ಉದ್ದೇಶ ಇಟ್ಟು ಕೊಂಡು ನಿರ್ಮಿತವಾದ ವಾಟ್ಸಫ್ ಗುಂಪು ತನ್ನ ಅರ್ಥ ಕಳೆದು ಕೊಳ್ಳುತ್ತದೆ. ಅಲ್ಲದೆ ಇಂತಹ ಕಿರಿಕಿರಿ, ವ್ಯತಿರಿಕ್ತ ಸಂದೇಶ ಗಳಿಂದ ಗುಂಪಿನ ಸದಸ್ಯರ ಭಾವನೆಗಳಿಗೆ ಘಾಸಿಯಾಗುವುದಲ್ಲದೆ ಸಮಾಜವನ್ನೂ ದಾರಿ ತಪ್ಪಿಸುವ ತಪ್ಪಲ್ಲೂ ಪಾಲುದಾರರಾಗುತ್ತೇವೆ ಎನ್ನುವುದನ್ನು ಮನಗಾಣ ಬೇಕು.
ಪ್ರಜ್ಞಾವಂತ ಯುವಕರು ಇಂತಹ ಸಂದೇಶಗಳಿಂದ ಹೆಚ್ಚಾಗಿ ತಲೆಕೆಡಿಸಲು ಹೋಗುವುದಿಲ್ಲ. ಅವರಲ್ಲಿ ವಿಷಯವನ್ನು ವಸ್ತುನಿಷ್ಠವಾಗಿ ಯೋಚಿಸುವ, ಪರಿಶೀಲಿಸುವ ವಿವೇಚನೆ ಮತ್ತು ವಿವೇಕ ಇದೆ. ಹಾಗಾಗಿ ದೇಶದ ಹಿತಕ್ಕಾಗಿ ಕೈ ಗೊಳ್ಳುವ ಯಾವುದೇ ನೀತಿ, ಯೋಜನೆಗಳನ್ನು ಬೆಂಬಲಿಸುತ್ತಾರೆ. ಮತ್ತು ದೇಶಕ್ಕೆ ಅಹಿತ ಎಂದು ಕಂಡು ಬಂದಲ್ಲಿ ಅಷ್ಟೇ ದ್ರಢತೆಯಿಂದ ತಿರಸ್ಕರಿಸುತ್ತಾರೆ. ಅವರು ಕಂಡ ಸುಂದರ, ಸಶಕ್ತ ಭಾರತದ ಕನಸು ನನಸಾಗಲು ದೇಶದಲ್ಲಿ ಎಲ್ಲಾ ಸ್ಥರದಲ್ಲಿ ತೀರ್ವ ಗತಿಯಲ್ಲಿ ಬದಲಾವಣೆ, ಸುಧಾರಣೆ ಮತ್ತು ರೂಪಾಂತರಣ, ಒನ್ಲೈನ್, ಡಿಜಿಟಲೈಜೇಶನ್ ಸಿಸ್ಟಮ್, ಆರ್ಥಿಕ ಸುಧಾರಣೆ, ಉದ್ಯೋಗವಕಾಶ ಹಾಗೂ ಸುಗಮ ಜೀವನಕ್ಕೆ ಶಾಂತಿಯುಕ್ತ ಸಮಾಜ, ಸೂಕ್ತ ವ್ಯವಸ್ಥೆಯ ವಾತಾವರಣದ ಕಲ್ಪನೆ ಕಲ್ಪಿಸುವುದು ಸಹಜ. ದೇಶ ಸ್ತಬ್ಧವಾಗಿ, ನೀರಸವಾಗಿರಲು ಇವರು ಯಾವತ್ತೂ ಬಯಸುವುದಿಲ್ಲ.
ಸಮಾಜ ಮಾಧ್ಯಮದ ಮೂಲಕ, ಪೂರ್ಣ ಬಹುಮತದಿಂದ ಆರಿಸಿ ಬಂದ ಯಾವುದೇ ಸರಕಾರವನ್ನು ಪದೇ ಪದೇ ಠೀಕಿಸುವುದು, ವಿಷಯವನ್ನು ವಸ್ತುನಿಷ್ಠವಾಗಿ ಚರ್ಚಿಸಿದೆ, ವಿರೋಧ ಎಂದು ಎಲ್ಲವನ್ನೂ ವಿರೋಧಿಸುವುದು ಆರೋಗ್ಯವಂತ ಸಮಾಜದ ಲಕ್ಷಣ ಅಲ್ಲ. ಪ್ರಜಾಪ್ರಭುತ್ವದಲ್ಲಿ ಪೂರ್ಣ ಬಹುಮತದಿಂದ ಆರಿಸಿ ಬಂದ ಯಾವುದೇ ಸರಕಾರಕ್ಕೆ ಆಡಳಿತ ನಡೆಸಲು ಸಂಪೂರ್ಣ ಅವಧಿ ನೀಡ ಬೇಕು. ಆ ಸರಕಾರದ ಒಳ್ಳೆಯದು, ಕೆಟ್ಟದ್ದನ್ನು ಅದರ ಅವಧಿಯ ಕೊನೆಯ ವರ್ಷದಲ್ಲಿ ವಿಮರ್ಶಿಸಿ ಅದಕ್ಕೆ ಅನುಗುಣವಾಗಿ ಮುಂದಿನ ಸರಕಾರವನ್ನು ಆಯ್ಕೆ ಮಾಡುವುದು ನಮ್ಮ ಪ್ರಜ್ಞಾವಂತಿಕೆಯನ್ನು ತೋರಿಸುತ್ತದೆ. ಅದರ ಬದಲು ನಾವೇ ಆರಿಸಿ ಕಳಿಸಿದ ಪೂರ್ಣ ಬಹುಮತದ ಸರಕಾರವನ್ನು, ಸಾಮಾಜಿಕ ಮಾಧ್ಯಮದ ಮೂಲಕ ಒಂದಲ್ಲ ಒಂದು ಕಾರಣದಿಂದ ಪದೇ ಪದೇ ಕಾಲು ಎಳೆಯ ತೊಡಗಿದರೆ ಅದು ಪ್ರಜಾಪ್ರಭುತ್ವ ಮಾದರಿ ಎನಿಸಿ ಕೊಳ್ಳುವುದಿಲ್ಲ, ಬದಲು, ಅದು ಪ್ರಜಾಪ್ರಭುತ್ವದ ಮೂಲ ಬೇರನ್ನು ದೌರ್ಬಲ್ಯಗೊಳಿಸಿ ನಾಶ ಪಡಿಸಿದಂತಾಗುತ್ತದೆ.
ಸಾಮಾಜಿಕ ಮಾಧ್ಯಮದ ಮೂಲಕ ಸಣ್ಣ, ಸಣ್ಣ ಕೆಲಸ ಮಾಡಿ ಸಮಾಜ ಸೇವೆ ಮಾಡಲು ನಮ್ಮಲ್ಲಿ ಸಾಕಷ್ಟು ಅವಕಾಶಗಳಿವೆ. ವಾಟ್ಸಪ್ ಮುಖಾಂತರ ನಮ್ಮ ಸಮಾಜದಲ್ಲಿ ಬಹಳಷ್ಟು ಪುರುಷ, ಮಹಿಳೆಯರು, ಸದ್ದು ಗದ್ದಲ ಇಲ್ಲದೆ ಸಮಾಜ ಸೇವೆ ಮಾಡಿ ಸಮಾಜದ ಋಣ ತೀರಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ನಮ್ಮಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಸ್ಪಂದಿಸುವ ಶಕ್ತಿ, ಬುದ್ಧಿಮತ್ತತೆ, ಪ್ರತಿಭೆ, ಕ್ಷಮತೆ ಇದ್ದೇ ಇದೆ. ಅದಕ್ಕೆ ಸಾಮಾಜಿಕ ಮಾಧ್ಯಮ ಒಂದು ವರದಾನವಾಗ ಬೇಕೇ ವಿನಾ ಶಾಪವಾಗ ಬಾರದು. ಸಮಾಜವನ್ನು ಎಚ್ಚರಿಸುವ, ಜಾಗ್ರತೆಗೊಳಿಸುವ, ತಿದ್ದಿ ತೀಡುವ, ಶಿಕ್ಷಣ ನೀಡುವ ಸಾಮಾಜಿಕ ಮಾಧ್ಯಮ ಇಂದು ಬರೀ ರಾಜಕೀಯದ ಚಾವಡಿ ಆಗಿ ಬಿಟ್ಟರೆ ದೇವರೇ ಕಾಪಾಡ ಬೇಕು!!!
No comments:
Post a Comment