ಪುಣೆ : ದೇವಾಡಿಗ ಸಂಘ ಪುಣೆ ಇದರ 6ನೇ ವಾರ್ಷಿಕೋತ್ಸವ ಸಮಾರಂಭವು ಜ 28 ರಂದು ಸಂಜೆ 2:30ರಿಂದ ಪುಣೆ ಕನ್ನಡ ಸಂಘದ ಡಾ .ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಭವನ ,ಕೇತ್ಕರ್ ರೋಡ್ ,ಪುಣೆ ದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ . ಸಂಘದ ಅಧ್ಯಕ್ಷ ಸಚಿನ್ ದೇವಾಡಿಗರವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎ ಸಿ ಎಂ ಇ ಬಿಲ್ಡಿಂಗ್ ಮೆಟೀರಿಯಲ್ ಟ್ರೇಡಿಂಗ್ ಎಲ್ .ಎಲ್ .ಸಿ ದುಬಾಯಿ ಇದರ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ,ಗೌರವ ಅತಿಥಿಗಳಾಗಿ ನಾಸಿಕ್ ನ ಹೋಟೆಲ್ ಉದ್ಯಮಿ ರವೀಶ್ ಎನ್ ಮೂಲ್ಕಿ ,ಪ್ರೊ .ಕಬಡ್ಡಿ ಖ್ಯಾತಿಯ ಮುಂಬಯಿಯ ಸ್ಟಾರ್ ಆಟಗಾರ ರಿಶಾಂಕ್ ದೇವಾಡಿಗ ,ಸುಮೀರಾ ಫುಡ್ ಪ್ರಾಡಕ್ಟ್ಸ್ ಪ್ರ . ಲಿ ಪುಣೆ ಇದರ ಆಡಳಿತ ನಿರ್ದೇಶಕರಾದ ಅಭಿಜಿತ್ ಖಾಡೆ ಆಗಮಿಸಲಿದ್ದಾರೆ .
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಘದ ಸದಸ್ಯರಿಂದ ವಿನೋದಾವಳಿಗಳು ,ಹರೀಶ್ ಶೇರಿಗಾರ್ ದುಬಾಯಿ ಮತ್ತು ಬಳಗದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ,ಭಾವನಾ ಡಾನ್ಸ್ ಸ್ಟುಡಿಯೋ ವಿಶ್ರಾಂತವಾಡಿ ಪುಣೆ ಇವರಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ .
ಸಂಘದ ಹೆಜ್ಜೆ ಗುರುತು ....
ಕಳೆದ 6 ವರ್ಷಗಳ ಹಿಂದೆ ಪುಣೆಯಲ್ಲಿದ್ದ ದೇವಾಡಿಗ ಸಮಾಜಬಾಂಧವರನ್ನು ಸಾಮಾಜಿಕವಾಗಿ ,ಸಾಂಸ್ಕೃತಿಕವಾಗಿ ಒಗ್ಗೂಡಿಸಿಕೊಂಡು ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಸಲುವಾಗಿ ಸಮಾಜದ ಹಿರಿಯರ ಮಾರ್ಗದರ್ಶನದಂತೆ ರೂಪುಗೊಂಡ ಸಂಸ್ಥೆಯೇ ದೇವಾಡಿಗ ಸಂಘ ಪುಣೆ . ಸಂಘದ ಸ್ಥಾಪಕಾಧ್ಯಕ್ಷ ಪ್ರಭಾಕರ ಜಿ ದೇವಾಡಿಗರ ನೇತೃತ್ವದಲ್ಲಿ ಪುಣೆ ನಗರ ,ಪಿಂಪ್ರಿ ಚಿಂಚ್ವಾಡ್ ಸೇರಿದಂತೆ ಪುಣೆಯೆಲ್ಲೆಡೆ ಅಲ್ಲಲ್ಲಿ ನೆಲೆಸಿದ್ದ ಸಮಾಜಬಾಂಧವರನ್ನು ಪರಿಚಯಿಸಿಕೊಂಡು ಸಂಘದೊಂದಿಗೆ ಜೋಡಿಸುವ ಕಾರ್ಯವನ್ನು ಸಂಘಟಕರು ಸಾಮಾಜಿಕ ಬದ್ಧತೆಯೊಂದಿಗೆ ನಿಸ್ವಾರ್ಥವಾಗಿ ತೊಡಗಿಸಿಕೊಂಡು ಸಂಘವನ್ನು ಕಟ್ಟುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ . ಸಂಘದ ವತಿಯಿಂದ ಸಮಾಜಬಾಂಧವರಿಗಾಗಿ ಪ್ರತೀ ವರ್ಷ ಶಿಕ್ಷಣ ,ಸಾಮಾಜಿಕ ,ಸಾಂಸ್ಕೃತಿಕ ,ಕ್ರೀಡೆ ,ವಾರ್ಷಿಕೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜಬಾಂಧವರ ಆಶೋತ್ತರಗಳನ್ನು ಪರಿಗಣಿಸಿ ಸಮಾಜಮುಖಿ ಚಿಂತನೆಗಳೊಂದಿಗೆ ಅತೀ ಕಡಿಮೆ ಅವಧಿಯಲ್ಲಿಯೇ ಪುಣೆಯಲ್ಲಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡ ಹೆಗ್ಗಳಿಕೆ ಸಂಘಕ್ಕಿದೆ .
ಸಂಘದ ಸಾಮಾಜಿಕ ಬದ್ಧತೆ
ಸಮಾಜದ ಮಕ್ಕಳು ಆರ್ಥಿಕ ಅಡಚಣೆಯಿಂದ ವಿದ್ಯಾವಂಚಿತರಾಗಬಾರದೆನ್ನುವ ಉದ್ದೇಶದಿಂದ ಅವರಿಗೆ ವಿದ್ಯೆಗೆ ಪ್ರೋತ್ಸಾಹ ನೀಡಲು ವಿದ್ಯಾನಿಧಿಯನ್ನು ಸ್ಥಾಪಿಸಿ ನೆರವು ನೀಡುತ್ತಾ ಬಂದಿದೆ . ಮಕ್ಕಳಿಗೆ ಕ್ರೀಡೆಗೆ ಪ್ರೋತ್ಸಾಹಿಸುವ ಸಲುವಾಗಿ ಕ್ರೀಡಾಕೂಟವನ್ನು ಆಯೋಜಿಸುವುದಲ್ಲದೆ ತುರ್ತು ಸಮಯದಲ್ಲಿ ರೋಗಿಗಳಿಗೆ ನೆರವಾಗುವುದು ,ಮಹಿಳೆಯರಿಗಾಗಿ ಅರಸಿನ ಕುಂಕುಮದಂತಹ ಧಾರ್ಮಿಕ ಕಾರ್ಯಕ್ರಮದ ಆಯೋಜನೆ ,ದಸರಾ ಸಂದರ್ಭ ಭಜನೆ ,ಪೂಜೆ ,ದಾಂಡಿಯಾ ಕಾರ್ಯಕ್ರಮಗಳ ಆಯೋಜನೆ ,ತುಳುನಾಡಿನ ಆಚಾರವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವಂತಹ ಆಟಿಕೂಟದಂತಹ ಆಚರಣೆ ,ಪ್ರತೀ ವರ್ಷ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಸೂಕ್ತ ವೇದಿಕೆಯನ್ನು ಒದಗಿಸಿಕೊಡುವುದು ,ಸಮಾಜದ ಸಾಧಕರನ್ನು ಗುರುತಿಸಿ ಸಮ್ಮಾನಿಸುವುದು ,ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವುದು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳಿಂದ ಸಂಸ್ಥೆ ಕಾರ್ಯೋನ್ಮುಖವಾಗಿ ಗಮನ ಸೆಳೆಯುತ್ತಿದೆ .
ಯಶಸ್ಸಿನ ಹಿಂದಿರುವ ಸಂಘದ ಸಮಿತಿ
ಸಂಘದ ಸ್ಥಾಪಕಾಧ್ಯಕ್ಷರಾಗಿ ಆಯ್ಕೆಗೊಂಡ ಪ್ರಭಾಕರ ಜಿ ದೇವಾಡಿಗರ ದಕ್ಷ ನೇತೃತ್ವದಲ್ಲಿ ನಾಲ್ಕು ವರ್ಷಗಳ ಕಾಲ ಸಂಘಟನೆ ಯಶಸ್ವಿಯಾಗಿ ಮುನ್ನಡೆಯಿತಲ್ಲದೆ ಇದೀಗ ಸಚಿನ್ ಕೆ ದೇವಾಡಿಗರು ಅಧ್ಯಕ್ಷರಾಗಿ ಆಯ್ಕೆಯಾಗಿ ಸಂಘದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಗೌರವಾಧ್ಯಕ್ಷ ಅಣ್ಣಯ್ಯ ಬಿ ಶೇರಿಗಾರ್ , ಸ್ಥಾಪಕಾಧ್ಯಕ್ಷ ಪ್ರಭಾಕರ ಜಿ ದೇವಾಡಿಗ,ಮುಖ್ಯ ಸಲಹಾಗಾರರಾದ ನರಸಿಂಹ ದೇವಾಡಿಗ,ಉಪಾಧ್ಯಕ್ಷರಾದ ಕೃಷ್ಣ ಕಲ್ಯಾಣ್ ಪುರ್ ಹಾಗೂ ಮಹಾಬಲೇಶ್ವರ್ ದೇವಾಡಿಗ ,ಪ್ರಧಾನ ಕಾರ್ಯದರ್ಶಿ ಪ್ರಿಯಾ ಹೆಚ್ ದೇವಾಡಿಗ ,ಕೋಶಾಧಿಕಾರಿ ಸುರೇಶ್ ಶ್ರೀಯಾನ್ ,ಜತೆ ಕಾರ್ಯದರ್ಶಿ ನಾರಾಯಣ ದೇವಾಡಿಗ ,ಜತೆ ಕೋಶಾಧಿಕಾರಿ ವಿಠಲ್ ದೇವಾಡಿಗ ,ಕ್ರೀಡಾ ಕಾರ್ಯದರ್ಶಿ ಯಶವಂತ್ ಜಿ ದೇವಾಡಿಗ ,ಸಾಂಸ್ಕೃತಿಕ ಕಾರ್ಯದರ್ಶಿ ಜನಾರ್ಧನ್ ದೇವಾಡಿಗ ,ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ್ ದೇವಾಡಿಗ ,ಸಂತೋಷ್ ದೇವಾಡಿಗ ,ಉದಯ ದೇವಾಡಿಗ ಹಾಗೂ ಪ್ರಕಾಶ್ ದೇವಾಡಿಗ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಅವಿರತ ಶ್ರಮದಿಂದ ಸಂಸ್ಥೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ .ಈಗಾಗಲೇ ಸಂಘವು ಸ್ವಂತ ಕಚೇರಿಯನ್ನು ಹೊಂದುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ .ಇದೀಗ 6 ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಸಮಾಜಬಾಂಧವರೆಲ್ಲರೂ ಆಗಮಿಸುವಂತೆ ಸಂಘದ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿರುತ್ತಾರೆ .
No comments:
Post a Comment