ಈ ಪ್ರಪಂಚದಲ್ಲಿ ಜ್ಞಾನ ಎಂಬುದು ಬಹು ಮುಖ್ಯ ಸಂಪತ್ತು. ವಿಶೇಷವಾದ ತಿಳಿವಳಿಕೆಯುಳ್ಳವರನ್ನು ಜ್ಞಾನಿಗಳೆನ್ನುತ್ತಾರೆ. ಅಂಥ ಜ್ಞಾನವಿಲ್ಲದವರನ್ನು ಅಜ್ಞಾನಿಗಳೆಂದೂ, ಕಡಿಮೆ ಜ್ಞಾನವುಳ್ಳವರನ್ನು ಅಲ್ಪ ಜ್ಞಾನಿಗಳೆಂದೂ ಕರೆಯುತ್ತಾರೆ. ಇನ್ನೊಂದು ವರ್ಗದವರಿರುತ್ತಾರೆ. ಅವರು ಅಲ್ಪ ಜ್ಞಾನಿಗಳಾಗಿದ್ದರೂ ತಾವು ಮಹಾ ಜ್ಞಾನಿಗಳು ಎಂಬಂತೆ ಕೆಟ್ಟ ಅಹಂಕಾರದಿಂದ ವರ್ತಿಸುತ್ತಾರೆ. ಕೇವಲ ತಮ್ಮ ಮನೆತನ, ಕುಲ, ಹುದ್ದೆಯ ಬಲದಿಂದ ವ್ಯವಹರಿಸುತ್ತಾರೆ. ಅಂಥವರ ಕಣ್ಣು ತೆರೆಯಿಸಿದ ಒಂದು ಹಳ್ಳಿಯ ಮುದುಕಿಯ ಪ್ರಸಂಗ ಅತೀವ ಸ್ವಾರಸ್ಯಕರವಾಗಿದೆ:
ಮಾಳವ ದೇಶದ ರಾಜನಾದ ಭೋಜನು ಒಮ್ಮೆ ತನ್ನ ಆಸ್ಥಾನದ ಮಹಾ ಪಂಡಿತನಾದ ಮಾಘನೊಂದಿಗೆ ವಿಹಾರಕ್ಕೆ ಹೊರಟಿದ್ದ. ಹಳ್ಳಿಯೊಂದರಲ್ಲಿ ದಾರಿ ತಪ್ಪಿದರು. ಇಷ್ಟರಲ್ಲಿ ಹಳ್ಳಿಯ ಒಬ್ಬ ಮುದುಕಿ ಸಿಕ್ಕಿದಳು. ಇಬ್ಬರೂ ಆಕೆಗೆ ನಮಸ್ಕರಿಸಿ ಪ್ರಶ್ನಿಸಿದರು-
'ಅಜ್ಜಿ, ಈ ರಸ್ತೆ ಎಲ್ಲಿಗೆ ಹೋಗುತ್ತದೆ?'
ಮುದುಕಿ ಉತ್ತರಿಸಿದಳು-'ಈ ರಸ್ತೆ ಇಲ್ಲೇ ಇರುತ್ತದೆ. ಇದರ ಮೇಲೆ ನಡೆಯುವವರು ಮಾತ್ರ ಹೋಗುತ್ತಾರೆ. ಆದರೆ ನೀವು ಯಾರು?'
ಇಬ್ಬರೂ ನುಡಿದರು-
'ನಾವು ಪಥಿಕರು'.
ತಕ್ಷ ಣವೇ ಮುದುಕಿ ಹೇಳಿದಳು-'ಈ ಲೋಕದಲ್ಲಿ ಇಬ್ಬರೇ ಪಥಿಕರು. ಒಬ್ಬ ಸೂರ್ಯ ಮತ್ತೊಬ್ಬ ಚಂದ್ರ. ನೀವು ಯಾವ ಪಥಿಕರು?'
ಮಾಘ ಪಂಡಿತರು ನುಡಿದರು-'ನಾವು ಅತಿಥಿಗಳು'.
ಮುದುಕಿ ಥಟ್ಟನೆ ಪ್ರಶ್ನಿಸಿದಳು- 'ಇಬ್ಬರೇ ಅತಿಥಿಗಳು ಈ ಪ್ರಪಂಚದಲ್ಲಿ. ಮೊದಲನೆಯದು ಧನ, ಎರಡನೆಯದು ಯೌವನ. ನೀವು ಯಾರು?'
ಈಗ ರಾಜ ಭೋಜರಾಜ ಉತ್ತರಿಸಿದ-'ನಾವು ಇಲ್ಲಿಯ ರಾಜ ಭೋಜರಾಜರು'.
ಮುದುಕಿ ಮತ್ತೆ ಕೇಳಿದಳು-'ರಾಜರು ಇಬ್ಬರೇ. ಸ್ವರ್ಗದ ರಾಜ ಇಂದ್ರ, ಮತ್ತೊಬ್ಬ ಯಮರಾಜ, ನೀವು ಯಾರು?'
ಇಬ್ಬರೂ ಉತ್ತರಿಸಿದರು. 'ನಾವು ಸಾಮರ್ಥ್ಯವಂತರು'.
ಆಕೆ ನುಡಿದಳು- 'ಈ ಪ್ರಪಂಚದಲ್ಲಿ ಇಬ್ಬರೇ ಸಾಮರ್ಥ್ಯವಂತರು. ಪೃಥ್ವಿ ಮತ್ತು ನಾರಿ. ನೀವು ಹಾಗೆ ಕಾಣಿಸುವುದಿಲ್ಲ. ಮತ್ತೆ ಯಾರು ನೀವು?'
ರಾಜ ಭೋಜ ನುಡಿದ-'ನಾವು ಸಾಧುಗಳು'.
ಮುದುಕಿಯೆಂದಳು-'ಇಬ್ಬರೇ ಸಾಧುಗಳು. ಒಂದು ಶೀಲ ಮತ್ತೊಂದು ಸಂತೋಷ. ನಿಜ ಹೇಳಿ, ನೀವು ಯಾರು?'.
ಮಾಘ ನುಡಿದ 'ನಾವು ಪರದೇಶಿಗಳು'
ಮುದುಕಿ ಹೇಳಿದಳು- 'ಜೀವ ಮತ್ತು ಮರಣ ಪರದೇಶಿಗಳು, ನೀವ್ಯಾರು?'.
ಚಕಿತನಾದ ಮಾಘ ಪಂಡಿತ ನುಡಿದ-'ನೀನೇ ಹೇಳು ಅಜ್ಜಮ್ಮ, ನಾವು ಸೋತವರು'.
ಮುದುಕಿಯೆಂದಳು-'ಯೇ ತಮ್ಮ, ಈ ಪ್ರಪಂಚದಲ್ಲಿ ಸಾಲ ತೆಗೆದುಕೊಂಡವರು ಸೋತವರು. ನೀವು ಯಾರು?'
ಕೊನೆಗೂ ಅವರು ಸೋಲೊಪ್ಪಿಕೊಂಡು ಜಾಣೆ ಮುದುಕಿಯೊಡನೆ ಹೇಳಿದರು-'ಹೇಳು ತಾಯಿ, ನಮಗೇನೂ ತಿಳಿಯದು. ನಿಜಾಂದ್ರೆ ನೀನೇ ಎಲ್ಲ ಅರಿತವಳಮ್ಮ'.
ತುಸು ಗಂಭೀರಳಾದ ಮುದುಕಿ ನುಡಿದಳು-'ನಿಮ್ಮಿಬ್ಬರಿಗೂ ಪಾಂಡಿತ್ಯ ಮತ್ತು ಐಶ್ವರ್ಯದ ಅಹಂಕಾರ ತಲೆಗೇರಿತ್ತು. ನೀವು ರಾಜ ಭೋಜ ಮತ್ತು ಮಾಘ ಪಂಡಿತನೆಂದು ನನಗೆ ತಿಳಿದಿತ್ತು. ರಸ್ತೆ ಈ ಕಡೆಗಿದೆ. ಇನ್ನೆಂದೂ ಇಂಥ ಅಹಂಕಾರ ತೋರಿಸಬೇಡಿ'.
ಅಹಂಕಾರದ ಪಿತ್ಥ ತಲೆಯಿಂದ ಇಳಿಯುತ್ತಲೇ ಇಬ್ಬರೂ ತಪ್ಪೊಪ್ಪಿಕೊಂಡು ಕ್ಷ ಮೆ ಯಾಚಿಸಿದರು. ಮುಂದಕ್ಕೆ ತಮ್ಮನ್ನು ಸಾಮಾನ್ಯ ಮನುಷ್ಯರೆಂದು ಭಾವಿಸಿ ಪರಿವರ್ತಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.
ಸಾಮಾನ್ಯವಾಗಿ ಜನರು ತಮ್ಮ ಅಂತರಂಗದ ಒಳಗುಟ್ಟನ್ನು ಅಡಗಿಸಿಡಲು, ಕೆಲವರು ಸುಳ್ಳು ಹೇಳುವುದುಂಟು. ಯಾರಿಗೂ ಹಾನಿಯುಂಟು ಮಾಡದೆ ಸುಳ್ಳು ಹೇಳಿದರೆ ಪರವಾಗಿಲ್ಲ ಎಂದು ಅವರು ಭಾವಿಸುವುದಿದೆ. ಆದರೆ ಅಹಂಕಾರ ಎಂಬುದು ಅತ್ಯಂತ ಅಪಾಯಕಾರಿ. ಅಹಂಕಾರದಿಂದ ಪ್ರೇರಿತರಾಗುವ ಮಂದಿ ಅಹಂಕಾರ, ತ್ಯಾಗ ಮಾಡಿದಾಗ ಬಹು ಸುಲಭವಾಗಿ ಸತ್ಯವಾದಿಗಳಾಗುವರು. ಇಂತಹ ಸತ್ಯವಾದಿಗಳ ಸಂಖ್ಯೆ ಈ ಲೋಕದಲ್ಲಿ ಹೆಚ್ಚಾಗಬೇಕಿದೆ.